ತರಳಬಾಳು ಹುಣ್ಣಿಮೆ ಮಹೋತ್ಸವ


ಸಿರಿಗೆರೆಯ ಶ್ರೀ ತರಳಬಾಳು ಜಗದ್ಗುರು ಬೃಹನ್ಮಠವು ಕಳೆದ ಎಪ್ಪತ್ತುನಾಲ್ಕು ವರ್ಷಗಳಿಂದ ವಾರ್ಷಿಕ ಆಚರಣೆಯಾಗಿ ನಡೆಸಿಕೊಂಡು ಬಂದಿರುವ “ತರಳಬಾಳು ಹುಣ್ಣಿಮೆ ಮಹೋತ್ಸವ”ವು ಸರ್ವಜನಾದರಣೆಯನ್ನು ಗಳಿಸಿದೆ. ಇಂದು ಸಂಕುಚಿತ ಬುದ್ಧಿಯ ಮೂಲಭೂತವಾದಿಗಳ ಕೋಲಾಹಲವು ಮಿತಿಮೀರಿದೆ. ವಿವಿಧ ಧರ್ಮಗಳ ಮಧ್ಯೆ ಸಂಶಯದ ಅಡ್ಡಗೋಡೆಗಳು ನಿರ್ಮಾಣವಾಗಿವೆ; ಇಡೀ ಜಗತ್ತು ಅಶಾಂತಿ ಮತ್ತು ಭಯೋತ್ಪಾದನೆಗೆ ತುತ್ತಾಗಿ ನಲುಗುತ್ತಿದೆ. ಇಂತಹ ವಿಷಮ ಸಂದರ್ಭದಲ್ಲಿ ಭಾವೈಕ್ಯ ಸಂಗಮವಾದ ಈ ಮಹೋತ್ಸವದ ಮಹಾವೇದಿಕೆ ದೇಶದ ಒಂದು ಆಶಾಕಿರಣವಾಗಿದೆ.

ಇತಿಹಾಸ


ವಿಶ್ವಬಂಧು ಮರುಳಸಿದ್ಧರು 12 ನೆಯ ಶತಮಾನದ ಬಸವಾದಿ ಶಿವಶರಣರ ಹಿರಿಯ ಸಮಕಾಲೀನರು. ಜನತೆಯ ಅಜ್ಞಾನ ಅಂಧಶ್ರದ್ಧೆ, ಮೂಢನಂಬಿಕೆ, ವಾಮಾಚಾರಗಳನ್ನು ತೊಲಗಿಸಲು ಅವರು ಕಂಕಣ ಬದ್ಧರಾಗಿ ಶ್ರಮಿಸಿದರು. ಹುಟ್ಟಿನಿಂದ ಅಂತ್ಯಜರಾದರೂ ಆಚರಣೆಯಿಂದ ಮಹಾಮಾನವರಾದರು. ಸಮಾಜವನ್ನು ಪಟ್ಟಭದ್ರ ಹಿತಾಸಕ್ತಿಗಳ ಶೋಷಣೆಯ ಕಬಂಧಬಾಹುಗಳಿಂದ ರಕ್ಷಿಸಲು ಆಜೀವ ಪರ್ಯಂತ ಹೋರಾಡಿದರು. ಧರ್ಮದ ತಳಹದಿಯ ಮೇಲೆ ಮಾನವ ಮಾನವರ ಮಧ್ಯೆ ತರತಮಭಾವವಿಲ್ಲದ ನವಸಮಾಜವನ್ನು ನಿರ್ಮಿಸಲು ಶ್ರಮಿಸಿದರು. ತಾವು ಹಚ್ಚಿದ ಧರ್ಮದ ಪ್ರಣತೆ ಆರದಂತೆ ಕಾಪಾಡಲು ತಮ್ಮ ಹುಟ್ಟೂರಾದ ಬಳ್ಳಾರಿ ಜಿಲ್ಲಾ ಕೂಡ್ಲಿಗಿ ತಾಲ್ಲೂಕಿನ (ಈಗಿನ ವಿಜಯನಗರ ಜಿಲ್ಲೆ ಕೊಟ್ಟೂರು ತಾಲ್ಲೂಕಿನ) ಉಜ್ಜಯಿನಿಯಲ್ಲಿ ಸದ್ಧರ್ಮ ಪೀಠವನ್ನು ಸ್ಥಾಪಿಸಿ ಅದರ ಮೇಲೆ ತೆಲುಗುಬಾಳು ಸಿದ್ಧೇಶ್ವರರನ್ನು ಮುಹೂರ್ತ ಮಾಡಿಸಿ ‘ತರಳಾ, ಬಾಳು’ ಎಂದು ಹರಸಿದರು. ‘ತರಳಾ ಬಾಳು’ ಎಂಬ ಪಂಚಾಕ್ಷರಿ ಮಂತ್ರದಲ್ಲಿ ಲೋಕದ ಜನರೆಲ್ಲರ ಕಲ್ಯಾಣವೇ ಅಡಕವಾಗಿದೆ. ಆ ಐತಿಹಾಸಿಕ ಘಟನೆ ಜರುಗಿದ ಹುಣ್ಣಿಮೆಯು ತರಳಬಾಳು ಹುಣ್ಣಿಮೆಯೆಂದು ವಿಖ್ಯಾತವಾಗಿದೆ. ಅಂತಹ ಲೋಕೋದ್ಧಾರದ ಅನುಪಮ ಆಶೀರ್ವಾದವನ್ನು ನೆತ್ತಿಯಲ್ಲಿ ಹೊತ್ತು ನಡೆದುಕೊಂಡು ಬಂದ ಸದ್ಧರ್ಮ ಸಿಂಹಾಸನದ ಗುರುಗಳು ತರಳಬಾಳು ಜಗದ್ಗುರುಗಳೆಂದು ಲೋಕಪ್ರಸಿದ್ಧವಾಗಿದ್ದಾರೆ. ಈ ಐತಿಹಾಸಿಕ ಘಟನೆಯ ಸವಿನೆನಪಿಗಾಗಿ ಪ್ರತಿವರ್ಷ ಮಾಘಶುದ್ಧ ಸಪ್ತಮಿಯಿಂದ ಹುಣ್ಣಿಮೆಯವರೆಗೆ 9 ದಿನಗಳ ಕಾಲ ತರಳಬಾಳು ಹುಣ್ಣಿಮೆ ಮಹೋತ್ಸವವನ್ನು ಆಚರಿಸಲಾಗುತ್ತದೆ.

20ನೆಯ ಶ್ರೀ ತರಳಬಾಳು ಜಗದ್ಗುರು ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರು 1949 ರಲ್ಲಿ ಸಿರಿಗೆರೆಯ ಬೃಹನ್ಮಠದಲ್ಲಿ ಮೊಟ್ಟ ಮೊದಲ ಬಾರಿಗೆ ಈ ಮಹೋತ್ಸವವನ್ನು ಸರಳವಾಗಿ ಆಚರಿಸಿ ಭದ್ರಬುನಾದಿ ಹಾಕಿಕೊಟ್ಟರು. ಸಿರಿಗೆರೆಯಿಂದ ಹೊರಗೆ ಆಚರಣೆ ಮೊದಲು ಆರಂಭವಾಗಿದ್ದು 1950 ರಲ್ಲಿ – ಜಗಳೂರಿನಲ್ಲಿ. ಆ ಮಹೋತ್ಸವದ ಸ್ವಾಗತ ಸಮಿತಿಯ ಅಧ್ಯಕ್ಷರು ಜಗಳೂರು ಇಮ್ಮಣ್ಣ ಎಂದೇ ಪರಿಚಿತರಾಗಿದ್ದ ಇಮಾಂ ಸಾಹೇಬರು. ಈಗ ಇದು ದೇಶದಲ್ಲಿಯೇ ಚಿರಪರಿಚಿತವಾದ ನಾಡಹಬ್ಬವಾಗಿದೆ. ದೇಶ, ಭಾಷೆ, ಧರ್ಮ, ಜಾತಿ, ಮತ ಮುಂತಾದ ಕಾರಣಗಳಿಂದ ಮನುಷ್ಯರ ಮಧ್ಯೆ ಇರುವ ಬೇಲಿಗಳನ್ನು ನಾಶಪಡಿಸಿ ಎಲ್ಲರನ್ನೂ ಒಂದಾಗಿ ಬೆಸೆಯುವ ಮಹೋತ್ಸವ ಬೆಸೆಯುತ್ತದೆ. ಈ ಉತ್ಸವದ ಸಂದರ್ಭದಲ್ಲಿ ಪ್ರತಿದಿನ ಸಂಜೆ ವಿವಿಧ ಧರ್ಮ ಗುರುಗಳು, ನಾಡಿನ ಮಠಾಧೀಶರುಗಳು, ಸಾಹಿತಿಗಳು, ಜನನಾಯಕರುಗಳು, ಸಂಸ್ಕೃತಿ ಚಿಂತಕರು, ಕಲಾವಿದರು ಜ್ಞಾನದಾಸೊಹವನ್ನು ಉಣಬಡಿಸುತ್ತಾರೆ. ಇದೊಂದು ಧಾರ್ಮಿಕ-ಸಾಂಸ್ಕೃತಿಕ-ಸಾಹಿತ್ಯಕ ಸುಗ್ಗಿ! “ಭಗವಂತನ್ನು ಸೇರಲು ಭಕ್ತನಿಗೆ ತೆರೆದುಕೊಂಡ ನಾನಾ ದಾರಿಗಳೇ ವಿವಿಧ ಧರ್ಮಗಳು” ಎಲ್ಲವುಗಳ ಗುರಿ ಒಂದೇ ಆಗಿರುವಾಗ ಅವುಗಳ ಹೆಸರಿನಲ್ಲಿ ನಡೆಯುವ ಕಚ್ಚಾಟಗಳು ಮನುಷ್ಯನ ಕ್ಷುದ್ರ ಬುದ್ಧಿಯ ದ್ಯೋತಕಗಳೆಂಬುದನ್ನು ಈ ಎಲ್ಲಾ ಕಾರ್ಯಕ್ರಮಗಳು ಭಾಗವಹಿಸುವವರ ಮನಸ್ಸಿನಲ್ಲಿ ಮೂಡಿಸುತ್ತವೆ.

ನಾಡಿನ ಸಮಸ್ಯೆಗಳಿಗೆ ಸ್ಪಂದನ


ಈ ಮಹೋತ್ಸವವು ಕೇವಲ ಧಾರ್ಮಿಕ ಕಾರ್ಯಕ್ರಮವಲ್ಲ. ಜನರ ನೋವಿಗೆ ಸ್ಪಂದಿಸುವುದೇ ನಿಜವಾದ ಧರ್ಮ ಎಂಬುದರಲ್ಲಿ ಅಪಾರ ವಿಶ್ವಾಸವಿರುವ ಬೃಹನ್ಮಠವು ನಾಡಿಗೆ ಸಂಕಟ ಒದಗಿ ಬಂದಾಗಲೆಲ್ಲಾ ನೊಂದವರ ಕಣ್ಣೀರೊರೆಸಿ ಸಾಂತ್ವನ ಹೇಳಲು ಈ ಮಹೋತ್ಸವವನ್ನು ವೇದಿಕೆಯಾಗಿ ಬಳಸಿಕೊಂಡಿದೆ. 1986 ರಲ್ಲಿ ಭೀಕರ ಬರಗಾಲ ತಲೆದೋರಿದ್ದರಿಂದ ಹುಣ್ಣಿಮೆಗೆ ಹೊಸ ರೂಪ ನೀಡಿ ಅದನ್ನು ಬರ ಪರಿಹಾರ ಕಾರ್ಯಕ್ರಮವಾಗಿ ಪರಿವರ್ತಿಸಲಾಯಿತು. ಮೇವು, ಕಾಳನ್ನು ಸಂಗ್ರಹಿಸಿ ನೊಂದ ಭಾಗದ ಜನರಿಗೆ ಹಂಚಲಾಯಿತು.

1993ರಲ್ಲಿ ಜಗಳೂರಿನಲ್ಲಿ ನಡೆದ ತರಳಬಾಳು ಹುಣ್ಣಿಮೆ ಮಹೋತ್ಸವದ ಸಂದರ್ಭದಲ್ಲಿ ಇಡೀ ತಾಲ್ಲೂಕಿನಲ್ಲಿ ನಡೆಯುತ್ತಿದ್ದ ಹಿಂದೂ ಸವರ್ಣೀಯರು ಮತ್ತು ಹರಿಜನರ ಮಧ್ಯೆಯ ಇದ್ದ ಎಲ್ಲ ಸಂಘರ್ಷಗಳ ಮೊಕದ್ದಮೆಗಳನ್ನು ರಾಜಿ ಮಾಡಿಸಲಾಯಿತು. ಕೇಸುಗಳನ್ನು ಹಿಂದೆ ತೆಗೆದುಕೊಳ್ಳಲು ಕಾನೂನಿನಲ್ಲಿ ಅವಕಾಶವಿಲ್ಲದ್ದರಿಂದ ಅಂದಿನ ಮುಖ್ಯಮಂತ್ರಿಗಳ ಮನ ಒಲಿಸಿ ಸಚಿವ ಸಂಪುಟದಲ್ಲಿ ಚರ್ಚಿಸಿ ಕೇಸುಗಳನ್ನು ಸರಕಾರವೇ ವಾಪಾಸು ತೆಗೆದುಕೊಳ್ಳುವಂತೆ ಮಾಡಿ ಸೌಹಾರ್ದತೆ ಕಾಪಾಡಲಾಯಿತು.

2001ರಲ್ಲಿ ಗುಜರಾತ್ ರಾಜ್ಯದಲ್ಲಿ ಉಂಟಾದ ಭೂಕಂಪವು ಲಕ್ಷಾಂತರ ಜೀವರಾಶಿಗಳನ್ನು ಬಲಿ ತೆಗೆದುಕೊಂಡಿತು. ಆಗ ಅರಸೀಕೆರೆಯಲ್ಲಿ ತರಳಬಾಳು ಹುಣ್ಣಿಮೆ ಆಚರಿಸುವ ಸಂದರ್ಭದಲ್ಲಿ ಕೊನೆಯ ದಿನದ ಉತ್ಸವವನ್ನು ರದ್ದುಪಡಿಸಲಾಯಿತು. ಬದಲಿಗೆ ಶ್ರೀ ತರಳಬಾಳು ಜಗದ್ಗುರುಗಳವರ ಪಾದಯಾತ್ರೆಯು ನಗರದ ಪ್ರಮುಖ ಬೀದಿಗಳಲ್ಲಿ ಜರುಗಿತು. ಆ ಪಾದಯಾತ್ರೆ ಸಂದರ್ಭದಲ್ಲಿ ಸಂಗ್ರಹವಾದ ಬೃಹತ್ ಮೊತ್ತದ ಕಾಣಿಕೆಯನ್ನು ಗುಜರಾತ್ ಸಂತ್ರಸ್ತ ಜನರಿಗೆ ಕಳುಹಿಸಲಾಯಿತು.

ಈ ಮಹೋತ್ಸವ ನಡೆದ ಸ್ಥಳಗಳಲ್ಲಿ ಸಾರ್ವಜನಿಕ ಸೇವಾ ಕಾರ್ಯಗಳು ನಡೆದಿವೆ. ಅಲ್ಲಲ್ಲಿ ಸಂಗ್ರಹವಾದ ಹಣವನ್ನು ಅಲ್ಲಲ್ಲಿಯ ಜನೋಪಕಾರಿ ಕಾರ್ಯಗಳಿಗೆ ಬಳಸುವುದು ಈ ಮಹೋತ್ಸವದ ವೈಶಿಷ್ಟ್ಯವಾಗಿದೆ. ಚನ್ನಗಿರಿಯಲ್ಲಿ ಸುಸಜ್ಜಿತ ಆಸ್ಪತ್ರೆ, ಉಳಿದೆಡೆಗಳಲ್ಲಿ ಶಾಲಾ ಕಾಲೇಜುಗಳು, ಸಮುದಾಯ ಭವನಗಳು ನಿರ್ಮಾಣವಾಗಿವೆ.

ಶಿಕ್ಷಣದ ಮಹತ್ವವನ್ನು ಮನಗಂಡಿದ್ದ ಲಿಂ|| ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರು ಸ್ವಾತಂತ್ರ್ಯ ಪೂರ್ವದಲ್ಲೆ (1946) ಸಿರಿಗೆರೆಯಲ್ಲಿ ಪ್ರೌಢಶಾಲೆಯೊಂದನ್ನು ತೆರೆದರು. 1962 ರಲ್ಲಿ ಶ್ರೀ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯನ್ನು ಸ್ಥಾಪಿಸುವ ಮೂಲಕ ಗ್ರಾಮೀಣ ಪ್ರದೇಶದಲ್ಲಿ ಶೈಕ್ಷಣಿಕ ಕ್ರಾಂತಿಗೆ ಕಾರಣೀಭೂತರಾಗಿದ್ದಾರೆ. ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರ ಮಾರ್ಗದರ್ಶನದಲ್ಲಿ ಇಂದು ಈ ವಿದ್ಯಾಸಂಸ್ಥೆಯು ಕರ್ನಾಟಕದಾದ್ಯಂತ 269 ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿದೆ. ಬಹುತೇಕ ಗ್ರಾಮೀಣ ಪ್ರದೇಶದಲ್ಲಿರುವ ಇವುಗಳಲ್ಲಿ ಕೆಲವು ನಾಡಿನ ಅತ್ಯುತ್ತಮ ಶಿಕ್ಷಣ ಸಂಸ್ಥೆಗಳ ಸಾಲಿನಲ್ಲಿವೆ.

ಈ ಬೃಹನ್ಮಠವು ಸಾಂಪ್ರದಾಯಿಕ ಶಿಕ್ಷಣ ಸಂಸ್ಥೆಗಳ ಮೂಲಕ ಶಿಕ್ಷಣ ಪ್ರಸಾರ ಮಾಡುತ್ತಿರುವುದು ಮಾತ್ರವಲ್ಲದೆ ತನ್ನ ಹಲವಾರು ಅಸಂಪ್ರದಾಯಿಕ ಶಿಕ್ಷಣ ಸಂಸ್ಥೆಗಳ ಮೂಲಕವೂ ಲೋಕ ಶಿಕ್ಷಣ ನೀಡುತ್ತಿರುವುದು ಶ್ಲಾಘನೀಯ. ಇವುಗಳಲ್ಲಿ ಮುಖ್ಯವಾದವುಗಳೆಂದರೆ, ಅಣ್ಣನ ಬಳಗ, ಅಕ್ಕನ ಬಳಗ, ತರಳಬಾಳು ಕಲಾ ಸಂಘ, ತರಳಬಾಳು ಪ್ರಕಾಶನ, ತರಳಬಾಳು ಜಗದ್ಗುರು ನಿಧಿ, ತರಳಬಾಳು ಗ್ರಾಮೀಣ ಅಭಿವೃದ್ಧಿ ಸಂಸ್ಥೆ, ತರಳಬಾಳು ಕೃಷಿ ವಿಜ್ಞಾನ ಕೇಂದ್ರ ಮುಂತಾದ ಅಂಗ ಸಂಸ್ಥೆಗಳು.

ಏತ ನೀರಾವರಿ ಯೋಜನೆಗಳು


ಕೃಷಿ ಪ್ರಧಾನವಾದ ಬಯಲು ಸೀಮೆಯಲ್ಲಿ ರೈತರು ಮಳೆಯೊಡನೆ ಜೂಜಾಟವಾಡುವ ಪರಿಸ್ಥಿತಿ. ಇದನ್ನು ಗಮನಿಸಿದ ಪೂಜ್ಯ ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ನದಿಗಳಿಂದ ಕೆರೆಗಳನ್ನು ತುಂಬಿಸುವ ಏತ ನೀರಾವರಿ ಯೋಜನೆಗಳ ಅನುಷ್ಠಾನಗೊಳಿಸುವ ಕಾರ್ಯದಲ್ಲಿ ಮುಂಚೂಣಿಯಲ್ಲಿದ್ದಾರೆ. ಈ ದಿಸೆಯಲ್ಲಿ ರಾಜನಹಳ್ಳಿ, ರಣಘಟ್ಟ, ಭರಮಸಾಗರ ಮುಂತಾದ ಏತ ನೀರಾವರಿ ಯೋಜನೆಗಳಿಂದ ಸಾವಿರಾರು ಕೆರೆಗಳು ತುಂಬುತ್ತಿವೆ. ಈ ಮೂಲಕ ರೈತರು ಬದುಕು ಹಸನಾಗಲು ಶ್ರೀಗಳವರು ಅಹರ್ನಿಶಿ ದುಡಿಯುತ್ತಿದ್ದಾರೆ.

ಈ ಬಾರಿ ಕೊಟ್ಟೂರಿನಲ್ಲಿ


ಈ ವರ್ಷ ಈ ಮಹೋತ್ಸವವು ವಿಜಯನಗರ ಜಿಲ್ಲೆ ಕೊಟ್ಟೂರಿನಲ್ಲಿ ಜರುಗಲಿದೆ. ದಿನಾಂಕ 28.1.2023 ರಿಂದ 5.2.2023 ರವರೆಗೆ ನಡೆಯಲಿರುವ ಈ ಸಮಾರಂಭದಲ್ಲಿ ನಾಡಿನ ಖ್ಯಾತ ಧಾರ್ಮಿಕ, ಸಾಹಿತ್ಯಕ, ಸಾಂಸ್ಕೃತಿಕ ಹಾಗೂ ರಾಜಕೀಯ ನೇತಾರರು ಪಾಲ್ಗೊಳ್ಳಲಿದ್ದಾರೆ. ನಿತ್ಯ ಉಪನ್ಯಾಸ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲದೆ, ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಗಾಗಿ ಕ್ರೀಡಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಿದೆ. ಹುತಾತ್ಮ ಯೋಧರ ಅವಲಂಬಿತರಿಗೆ ಧನಸಹಾಯ ಮಾಡಲಾಗುವುದು.